ದೃಢ ನಿರ್ಧಾರ, ದೃಢ ಮನಸ್ಸು

ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು (BRCPUC), ಹನುಮಂತನಗರ, ಮಂಡ್ಯ ಜಿಲ್ಲೆ. ಈ ವಸತಿ ಸಂಯುಕ್ತ ಕಾಲೇಜಿನಲ್ಲಿಯೇ ಮಗನನ್ನು ಸೇರಿಸಬೇಕೆಂಬ ಮಹದಾಸೆ ಹೊಂದಿರುವ ಅಪ್ಪ. 1st PUC ಪ್ರವೇಶ ಪರೀಕ್ಷೆ ಬರೆದ ಕೆಲವು ಘಂಟೆಗಳಲ್ಲಿ ಮಗ ಅನುತ್ತೀರ್ಣ ಎಂಬ ಸುದ್ದಿ ನಿರಾಶೆ ಮೂಡಿಸಿತು. " ಏನಯ್ಯಾ... ಇದೊಂದು ಪರೀಕ್ಷೆ ನೀನು ಪಾಸ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ನೋಡು, ಪಾಸ್ ಆಗಿರುವ ಆ ಎಲ್ಲಾ ಹುಡುಗರ ತಂದೆಯರು ಎಷ್ಟು ಖುಷಿಯಿಂದ ಹೋಗ್ತಿದ್ದಾರೆ... " ಎಂದು ಅಪ್ಪ ನೋವಿನಿಂದ ಹೇಳಿದ ಮಾತು, ಕೇಳಲು ಬಲು ಭಾರ. ಮಗ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದಾಗಿಯು ಸಹ ಏನಾದರೂ ಮಾಡಿ ಅವನನ್ನು ಇದೇ ಕಾಲೇಜಿನಲ್ಲಿ ಸೇರಿಸಬೇಕೆಂಬ ದೃಢ ನಿರ್ಧಾರ ಮಾಡಿದ್ದಾರೆ. ಕಾಲೇಜಿನಲ್ಲಿ ಅಪರಿಚಿತರನ್ನು ಮಾತನಾಡಿಸುತ್ತಾ, ಕಛೇರಿ ಕೊಠಡಿಯೊಳಗೆ ಹೋಗಿ ಬರುತ್ತಿದ್ದಾರೆ. ಸಂಜೆಯಾಯಿತು, ಅಪ್ಪನ ಮುಖದಲ್ಲಿ ವಿಫಲ ಪ್ರಯತ್ನದ ಭಾವನೆ. ನಿರಾಸೆಯಿಂದ ಬೆಂಗಳೂರಿನ ಕಡೆಗೆ ವಾಪಸ್ಸು ಪ್ರಯಾಣ. ಭಾರತಿ ಸಮೂಹ ಸಂಸ್ಥೆಯ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ. ಹನುಮಪ್ಪ ಸರ್ ಅವರ ಬಗ್ಗೆ ಯಾರಿಂದಲೋ ಮಾಹಿತಿ ಕಲೆಹಾಕಿದ್ದ ಅಪ್ಪ. ಮರುದಿನ ಮುಂಜಾನೆ 4 ಘಂಟೆಗೆ ಎದ್ದು, ಸುಮಾರು 6.30 ರ ವೇಳೆಗೆ ಕೆ.ಎಂ.ದೊಡ್ಡಿ ಯಲ್ಲಿರುವ ಅವರ ಮನೆ ಬಾಗಿಲ ಮುಂದೆ ಕಾದು ನಿಂತಿದ್ದ ನಮ್ಮನ್ನು ಅವರು ಒಳಗೆ ಕರೆದರು. ಅಪ್ಪನು ತಮ್ಮ ಪರಿಚಯ ಮಾಡಿಕೊಂಡರು. ಮಗನನ್ನ...