ಕನ್ನಡ ಕವನಗಳು

ಕನ್ನಡ ಕವನಗಳು (Kannada Kavanagalu)

ಡಿ.ವಿ.ಗುಂಡಪ್ಪ (DVG) ಯವರ ಮಂಕುತಿಮ್ಮನ ಕಗ್ಗ ಪದ್ಯಗಳು ಚೌಪದಿ ಅಂದರೆ ನಾಲ್ಕು ಸಾಲಿನ ಇರುತ್ತವೆ.

ಮಂಕುತಿಮ್ಮನ ಕಗ್ಗ ಪದ್ಯ - ೧ 
ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ
ಗುಡಿಯೊಳಗೆ ಕೊಡುವ ಹೂ ದೈವಭಕ್ತಂಗೆ ಚೆಂದ
ಬಿಡಿಗಾಸು ಹೂವಳಗೆ – ಮಂಕುತಿಮ್ಮ.!

ಭಾವಾರ್ಥ:
ಒಂದು ಹೂವನ್ನ ಹಲವು ಜನ ಹಲವು ಪ್ರಾಕಾರಗಳಲ್ಲಿ ಕಾಣುತ್ತಾರೆ.
ಒಬ್ಬ ಪ್ರಕೃತಿ ಪ್ರೇಮಿ ಹೇಳುತ್ತಾನೆ "ಎಷ್ಟು ಚೆನ್ನಾಗಿದೆ ಹೂವು".
ಒಬ್ಬ ರಸಿಕೆ ತನ್ನ ಪ್ರೇಯಸಿ ಮುಡಿದಿರುವ ಹೂವು ನೋಡಿ ಹೆಂಡತಿಗೆ ಹೇಳುತ್ತಾನೆ "ಎಷ್ಟು ಚೆನ್ನಾಗಿ ಕಾಣಿಸುತ್ತಿದೀಯಾ"
ಒಬ್ಬ ದೈವ ಭಕ್ತನಿಗೆ ದೇವರ ಗುಡಿಯಲ್ಲಿ ಕೊಟ್ಟ ಹೂವು ಸ್ವೀಕರಿಸಿ ಭಕ್ತಿಯಲ್ಲಿ ನಾನೆಷ್ಟು ಧನ್ಯ ಎನ್ನುತ್ತಾನೆ.
ಅದೇ ಹೂವು ಮಾರುವವಳಿಗೆ ಬಿಡಿಗಾಸಿನ ಲೆಕ್ಕವಷ್ಟೆ.
ಒಂದು ವಸ್ತುವಿನ ನೋಡುವ ದೃಷ್ಟಿ ಬೇರೆಯಾದಂತೆ ಅದರ ಉಪಯೋಗ ಬದಲಾಗುತ್ತೆ.

ಮಂಕುತಿಮ್ಮನ ಕಗ್ಗ ಪದ್ಯ - ೨
ಜನಕಜಯದರುಷದೇನಾಯ್ತು ರಾವಣ ಚಪಲ
ಕನಕಮೃಗದರುಶನದೇ ಜಾನಕಿಯ ಚಪಲ 
ಜನವವನ ನಿಂದಿಪುದು ಕನಿಕರಿಪುದೀಕೆಯಲಿ
ಮನದ ಬಗೆ ಹರಿಯದುದು - ಮಂಕುತಿಮ್ಮ.! 

ಭಾವಾರ್ಥ: 
ಜನಕ ಮಹಾರಾಜನ ಮಗಳು ಸೀತೆಯನ್ನ ನೋಡಿದ ರಾವಣನಿಗೆ ಚಪಲ ಆಯಿತು - ಹೆಣ್ಣು ವ್ಯಾಮೋಹ. 
ಬಂಗಾರದ ಜಿಂಕೆಯನ್ನು ನೋಡಿದ ಸೀತೆಗೆ ಆಸೆ ಆಯಿತು - ಸಹಜವಾಗಿ ಹೆಣ್ಣಿಗೆ ಬಂಗಾರದ ಚಪಲ.
ನಂತರ ಸೀತೆಯ ಅಪಹರಣ, ರಾಮ-ರಾವಣರ ಯುದ್ಧ. ಈ ಯುದ್ಧಕ್ಕೆ ಮುಖ್ಯ ಕಾರಣ ಯಾವುದು? 
ಜನ ರಾವಣನನ್ನ ದುಷ್ಟ ಎಂದು ನಿಂದನೆ ಮಾಡಿದರು. 
ಜನರು ಸೀತೆಯ ಬಗ್ಗೆ ಕನಿಕರ ತೋರಿಸಿದರು. 
ಆದರೆ ಜನರ ಮನಸ್ಸನ್ನ ತಿಳಿದುಕೊಳ್ಳುವುದು ಬಹಳ ಕಷ್ಟ.

ಮಂಕುತಿಮ್ಮನ ಕಗ್ಗ ಪದ್ಯ - ೩
ನೂರಾರು ಮತವಿಹುದು ಲೋಕದುಗ್ರಾಣದಲಿ
ಆರಿಸಿಕೋ ನಿನ್ನ ರುಚಿಗೊಪ್ಪುವುದನದರೊಳ್ 
ಸಾರದಡುಗೆಯನೊಳವಿಚಾರದೊಲೆಯಲಿ ಮಾಡು
ಬೇರೆ ಮತಿ ಬೇರೆ ಮತ - ಮಂಕುತಿಮ್ಮ.!

ಭಾವಾರ್ಥ:
ಈ ಲೋಕದಲ್ಲಿ ಪ್ರತಿಯೊಂದಕ್ಕೂ ವಿಷಯಕ್ಕೂ ಹಲವಾರು ಬಗೆಯ ಅಭಿಪ್ರಾಯಗಳು ಇರುತ್ತವೆ.
ಅವುಗಳಲ್ಲಿ ನಿನ್ನ ವಿವೇಚನೆಗೆ ಒಪ್ಪುವಂತಹದನ್ನ ಆರಿಸಿಕೋ.
ವಿಚಾರ ಎಂಬ ಒಲೆಯಲ್ಲಿ ಅರ್ಥಪೂರ್ಣವಾದ ಅಡುಗೆಯನ್ನ ಮಾಡಿದಾಗ ಅದಕ್ಕೆ ಒಳ್ಳೆಯ ಅರ್ಥ ಸಿಗಲಿದೆ.
ಜ್ಞಾನ ಬೇರೆ ಆದಂತೆ ಅಭಿಪ್ರಾಯ ಕೂಡ ಬೇರೆ ಇರುತ್ತೆ. 

ಮಂಕುತಿಮ್ಮನ ಕಗ್ಗ - ಪದ್ಯ - ೪
ಇಳೆಯಿಂದ ಮೊಳಕೆಯೊಗವಂದು ತಮಟೆಗಳಿಲ್ಲ
ಫಲ ಮಾಗುವಂದು ತುತ್ತೂರಿ ದನಿಯಿಲ್ಲ
ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು - ಮಂಕುತಿಮ್ಮ.!

ಭಾವಾರ್ಥ:
ಭೂಮಿಯಿಂದ ಬಿತ್ತನೆ ಬೀಜ ಸದ್ದಿಲ್ಲದೇ, ಅಬ್ಬರವಿಲ್ಲದೆ ಮೊಳೆಕೆಯೊಡೆದು ಮೇಲೆ ಬರುತ್ತೆ. 
ಹುಳಿ ಕಾಯಿ ಮಾಗುವಾಗಲು ಸದ್ದಿಲ್ಲ
ಲೋಕಕ್ಕೆ ಬೆಳಕು ಕೊಡುವ ಸೂರ್ಯ ಚಂದ್ರರಿಂದಲೂ ಸದ್ದಿಲ್ಲ. 
ಆದರೆ ಮನುಷ್ಯ ಒಂದು ಚಿಕ್ಕ ಸಾಧನೆಗೂ ತನ್ನನ್ನು ತಾನು ಕೊಂಡಾಡಿಕೊಂಡು ಅಬ್ಬರಿಸುತ್ತ ಕುಣಿದು ಕುಪ್ಪಳಿಸುತ್ತಾನೆ. ಅವೆಲ್ಲವೂ ಈ ಲೋಕದಲ್ಲಿ ತೃಣ ಮಾತ್ರ. ನಿನ್ನ ಬಾಯಿಗೆ ಹೊಲಿಗೆ ಹಾಕಿದಂತೆ ಸುಮ್ಮನಿರೋ ಮಂಕುತಿಮ್ಮ. 


ಮಂಕುತಿಮ್ಮನ ಕಗ್ಗ - ಪದ್ಯ - ೫
ಪುಸ್ತಕದಿದೊರೆತರಿವು ಮಸ್ತಕದಿತಳೆದಮಣಿ 
ಚಿತ್ತದೊಳುಬೆಳೆದರಿವು ತರುತಳೆದಪುಷ್ಪ
ವಸ್ತುಸಾಕ್ಷಾತ್ಕಾರ ಅಂತರೀಕ್ಷಣೆಯಿಂದ 
ಶಾಸ್ತ್ರೀತನದಿಂದಲ್ಲ - ಮಂಕುತಿಮ್ಮ.!

ಭಾವಾರ್ಥ: 
ಪುಸ್ತಕದಿಂದ ಗ್ರಹಿಸಿದ ಅರಿವು/ಜ್ಞಾನ, ತಲೆಯಲ್ಲಿ ಅಡಗಿರುವ ಆಭರಣ. ಈ ಜ್ಞಾನವನ್ನ ಯಾರಿಗೆ ಬೇಕಿದ್ದರೂ ಹಂಚಬಹುದು. 
ಅಂತಃ ಚೈತನ್ಯದಿಂದ ಬಂದ ಅರಿವು/ಜ್ಞಾನ ಗಿಡದಲ್ಲಿ ಅರಳಿದ ಗಿಡದ ಸಾರವನ್ನು ಹೀರಿ ಬೆಳೆದ ಹೂವಿನಂತೆ. ಈ ಜ್ಞಾನವನ್ನ ಬೇರೆಯವರಿಗೆ ಕೊಡಲು ಸಾಧ್ಯವಲ್ಲ.
ಇದೆ ರೀತಿ ಒಂದು ವಸ್ತುವಿನ ಪೂರ್ಣ ಅರಿವು ನಮಗೆ ಆಗಬೇಕಿದ್ದರೆ ಅದರ ಒಳಅರ್ಥ ತಿಳಿದುಕೊಂಡಾಗ ಮಾತ್ರ ಆಗೋಕೆ ಸಾಧ್ಯ. ಶಾಸ್ತ್ರೀತನದಿಂದ ಅಲ್ಲ (ಬರಿ ಪುಸ್ತಕದಿಂದ ಅಲ್ಲ ಮಂಕುತಿಮ್ಮ). Comments

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಅಪ್ಪಾ... Ex-MP ಎಂದರೇನು?

ಮನೋಜ್ಞ ಮಾದರಿ

ಅಸಲಿ ರೈತ, ನಕಲಿ ಪ್ರೀತಿ.!

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!

ಸಾರ್ಥಕ ನಿವಾಸ

ಹೇಗಿದ್ದಾರೆ ಮೇಷ್ಟ್ರು..?