ದೃಢ ನಿರ್ಧಾರ, ದೃಢ ಮನಸ್ಸು

1st PUC ಪ್ರವೇಶ ಪರೀಕ್ಷೆ (Entrance Test) ಬರೆದ ಕೆಲವು ಘಂಟೆಗಳಲ್ಲಿ ಅನುತ್ತೀರ್ಣ ಎಂಬ ಸುದ್ದಿ. ಮಗನನ್ನು ಭಾರತೀ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜು (BRCPUC, ಹನುಮಂತನಗರ, ಮಂಡ್ಯ ಜಿಲ್ಲೆ) ಇಲ್ಲಿಯೇ ಸೇರಿಸಬೇಕೆಂಬ ಮಹದಾಸೆ ಹೊಂದಿರುವ ಅಪ್ಪನಿಗೆ ನಿರಾಸೆ.

"ಏನಯ್ಯಾ... ಇದೊಂದು ಪರೀಕ್ಷೆ ನೀನು ಪಾಸ್ ಆಗಿದ್ದಿದ್ರೆ ಚೆನ್ನಾಗಿರ್ತಿತ್ತು. ನೋಡು, ಪಾಸ್ ಆಗಿರುವ ಆ ಹುಡುಗರ ಎಲ್ಲಾ ತಂದೆಯರು ಎಷ್ಟು ಖುಷಿಯಿಂದ ಹೋಗ್ತಿದ್ದಾರೆ..." ಎಂದು ಅಪ್ಪ ನೋವಿನಿಂದ ಹೇಳಿದ ಮಾತು ಕೇಳಲು ಬಲು ಭಾರ.

ಮಗ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆದಾಗಿಯು ಸಹ ಏನಾದರೂ ಮಾಡಿ ಅವನನ್ನು ಇದೇ ಕಾಲೇಜಿನಲ್ಲಿ ಸೇರಿಸಬೇಕೆಂಬ ದೃಢ ನಿರ್ಧಾರ ಮಾಡಿದ್ದಾರೆ. ಕಾಲೇಜಿನಲ್ಲಿ ಅಪರಿಚಿತರನ್ನು ಮಾತನಾಡಿಸುತ್ತಾ, ಕಛೇರಿ ಕೊಠಡಿಯೊಳಗೆ ಹೋಗಿ ಬರುತ್ತಿದ್ದಾರೆ. ಸಂಜೆಯಾಯಿತು, ಅಪ್ಪನ ಮುಖದಲ್ಲಿ ವಿಫಲ ಪ್ರಯತ್ನದ ನಿರಾಸೆಯಿಂದ ಬೆಂಗಳೂರಿನ ಕಡೆಗೆ ವಾಪಸ್ಸು ಪ್ರಯಾಣ.

ಮರುದಿನ ಮುಂಜಾನೆ 6.30 ರ ವೇಳೆಗೆ ಕೆ.ಎಂ.ದೊಡ್ಡಿ ಯಲ್ಲಿರುವ ಅದೇ ಸಮೂಹ ಸಂಸ್ಥೆಯ ಮತ್ತೊಂದು ಕಾಲೇಜಿನ ಪ್ರಾಂಶುಪಾಲರಾಗಿದ್ದ ಶ್ರೀ. ಹನುಮಪ್ಪ ಸರ್ ರವರ ಮನೆ ಬಳಿ ಕಾದು ನಿಂತಿದ್ದ ನಮ್ಮನ್ನು ಅವರು ಒಳಗೆ ಕರೆದರು. ಅಪ್ಪನು ತಮ್ಮ ಪರಿಚಯ ಮಾಡಿಕೊಂಡರು. ಮಗನನ್ನು ಏಕೆ ಹಾಸ್ಟೆಲ್ ನಲ್ಲಿ ಓದಿಸಲು ನಿರ್ಧಾರ ಮಾಡಿದ್ದಾರೆ ಎಂಬುದರ ಬಗ್ಗೆ ಅವರಿಗೆ ಸೂಕ್ತ ಕಾರಣಗಳನ್ನು ಕೊಟ್ಟು, "ಹನುಮಂತನಗರ ದಲ್ಲಿರುವ ಭಾರತಿ ವಸತಿ ಸಂಯುಕ್ತ ಕಾಲೇಜಿನಲ್ಲಿ ಮಗನಿಗೆ ದಯಮಾಡಿ ಒಂದು ಅಡ್ಮಿಷನ್ ಮಾಡಿಸಿಕೊಡಿ" ಎಂದು ಕೈ ಮುಗಿದು ಬೇಡಿದರು. ಅಪ್ಪನ ಕೋರಿಕೆಗೆ ಮನಸೋತು, ಖುದ್ದಾಗಿ ಹನುಮಪ್ಪ ಸರ್ ಅವರೇ ಹನುಮಂತನಗರ ಕಾಲೇಜಿಗೆ ಬಂದು ಅಲ್ಲಿನ ಪ್ರಾಂಶುಪಾಲರ ಜೊತೆ ಮಾತನಾಡಿ, ವರ್ಷಕ್ಕೆ ಸೀಮಿತವಿದ್ದ 60 ಅಡ್ಮಿಷನ್ಸ್ ಎಲ್ಲವೂ ಭರ್ತಿಯಾಗಿದ್ದರೂ ಸಹ, 61ನೇ ಪ್ರವೇಶ ನನಗೆ ಖಚಿತ ಮಾಡಿಸಿಕೊಟ್ಟರು.

ಕಾಲೇಜು, ವಸತಿ, ಊಟ ಸೇರಿ ವರ್ಷದ ಶುಲ್ಕ 25 ಸಾವಿರ ರೂ. ಮೊದಲನೇ ಕಂತಿನಲ್ಲಿ 15 ಸಾವಿರ ರೂಪಾಯಿ ಹೊಂದಿಸಲು ಅಪ್ಪ ಪಡುತ್ತಿದ್ದ ಪಾಡು. ಕಡೆಗೆ, ಅಮ್ಮ ತನ್ನ ಮಾಂಗಲ್ಯ ಸರ ತೆಗೆದು ದೇವರ ಮುಂದಿಟ್ಟು ಅರಿಶಿನ ದಾರದಲ್ಲಿ ಮಾಂಗಲ್ಯ ಪೋಣಿಸಿಕೊಂಡ ದೃಶ್ಯ ಈಗಲೂ ಕಣ್ಣಿನಲ್ಲಿ ಹಸಿಯಾಗಿದೆ.

ಮಗನನ್ನು ಒಳ್ಳೆಯ ಕಾಲೇಜಿಗೆ ಸೇರಿಸಿದ್ದೇನೆ ಎಂಬ ಸಂತೃಪ್ತಿ. 
"ಆ ಕಾಲೇಜಿನಲ್ಲಿ ನಿನಗೆ ಅಡ್ಮಿಷನ್ ಸಿಗಲು ಕಾರಣ ಹನುಮಪ್ಪ ಸರ್, ಕಣಯ್ಯಾ... ಯಾವಾಗಲಾದರೂ ಅವರ ಮನೆಗೆ ಹೋಗಿ ಒಂದು ಸ್ವೀಟ್ ಬಾಕ್ಸ್ ಕೊಟ್ಟು, ಮಾತಾಡಿಸಿಕೊಂಡು ಬಾ..." ಎಂದು ಹಲವಾರು ಬಾರಿ ಹೇಳಿದ್ದರು. 8 ವರ್ಷಗಳ ನಂತರ ಹೇಳೋದನ್ನ ಸಂಪೂರ್ಣ ನಿಲ್ಲಿಸಿಯೇ ಬಿಟ್ಟರು. ಈಗ ಕೇವಲ ಅಪ್ಪನ ನೆನಪುಗಳು ಮಾತ್ರ.

ವಿದ್ಯಾಭ್ಯಾಸದಲ್ಲಿ ಮಹತ್ತರ ಬದಲಾವಣೆ ಕಂಡಿದ್ದೆ ಆ ಕಾಲೇಜಿನಲ್ಲಿ. ಅಪ್ಪ ಕಷ್ಟ ಪಟ್ಟು ಅಲ್ಲಿ ನನ್ನನ್ನು ಸೇರಿಸಿಲ್ಲವೆಂದಿದ್ದರೆ ನನ್ನ ಬದುಕು ಹೇಗಿರುತ್ತಿತ್ತೋ ಏನೋ ಎಂದು ಹಲವಾರು ಬಾರಿ ಅನ್ನಿಸಿದ್ದು ಉಂಟು. ಯಾವಾಗಲಾದರೂ ಹೋಗಿ ಹನುಮಪ್ಪ ಸರ್ ನ ಮಾತನಾಡಿಸಿ ಆಶೀರ್ವಾದ ಪಡೆಯಬೇಕೆಂಬ ಸಂಕಲ್ಪವಿದ್ದರೂ ದೃಢ ಮನಸ್ಸು ಮಾಡಿರಲಿಲ್ಲ. ಅದು ಆಗಾಗ್ಗೆ ಕಾಡುತ್ತಿರುತ್ತಿತ್ತು ಕೂಡ.

ಇತ್ತೀಚೆಗೆ ಹನುಮಪ್ಪ ಸರ್ ರವರ ಮೊಬೈಲ್ ನಂಬರ್ ಕಲೆಹಾಕಿದೆ. ಕರೆ ಮಾಡಿ, 23 ವರ್ಷಗಳ ಹಿಂದೆ ಅವರು ನನಗೆ ಮಾಡಿದ್ದ ಸಹಾಯ ನೆನಪಿಸಲು ಪ್ರಯತ್ನಿಸಿದೆ. ನೆನಪು ಬಂದಿಲ್ಲವಾದರೂ, ಹೌದಾ..! ಎಂದು ಸಂತೋಷಪಟ್ಟರು. ಮೈಸೂರಿನಲ್ಲಿ ನಿವೃತ್ತಿ ಜೀವನ ಸಾಗಿಸುತ್ತಿರುವ ಅವರ ಮನೆಗೆ ಹೋಗಿ ಒಂದು ಸ್ವೀಟ್ ಬಾಕ್ಸ್ ಜೊತೆಗೆ ಅಪ್ಪಟ ಶ್ರೀಗಂಧದದ ಪುಟ್ಟ ವಿಗ್ರಹವನ್ನು ನೀಡಿ ಕೃತಜ್ಞನಾಗಿ ಕಾಲಿಗೆ ಬಿದ್ದ ಕ್ಷಣ ಕಣ್ಣಲ್ಲಿ ನೀರು ತುಂಬಿತು. ಸುಮಾರು ಹೊತ್ತು ಮಾತನಾಡಿದೆವು. ಮನತುಂಬಿ ಹರಸಿ, ಹಾರೈಸಿ, ಆಶೀರ್ವಾದದ ಬುತ್ತಿ ನೀಡಿ ಕಳುಹಿಸಿಕೊಟ್ಟರು.

ಯಾವುದೇ ಕೆಲಸ, ಗುರಿ ಅಥವಾ ಸಂಕಲ್ಪಗಳು ಕಾರ್ಯಗತ ಆಗಬೇಕಿದ್ದರೆ ದೃಢ ನಿರ್ಧಾರ ಅಥವಾ ದೃಢ ಮನಸ್ಸು ಬಹಳ ಮುಖ್ಯ.

ರಾಘವೇಂದ್ರ. ಜಿ. ಶ್ರೀರಾಮಯ್ಯ 
9060660060         



Comments

  1. 🙏 felt emotional after reading this. Few people forget those who helped them, but really you great. After many years found mobile number and reached Sir. This takes you to next level.

    I believe, should not forget those who helped.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಹೇಗಿದ್ದಾರೆ ಮೇಷ್ಟ್ರು..?

ಮನೋಜ್ಞ ಮಾದರಿ

ಸಾರ್ಥಕ ನಿವಾಸ

ಅಪ್ಪಾ... Ex-MP ಎಂದರೇನು?

ಬಡಿದೆಬ್ಬಿಸಿ ಕೇಳಬೇಕು ಗಾಂಧೀಜಿ ಯನ್ನ