ಹೌದು, ಇದೇ ನಂಬರ್ 1
ಈ ವಿಡಿಯೋ ನೋಡಿದ ತಕ್ಷಣ ನಂಗೆ ನೆನಪು ಆಗಿದ್ದು ನನ್ನ ತಂದೆ ಪ್ರತಿ ಬಾರಿಯೂ ಹೇಳುತ್ತಿದ್ದ ಮಾತು.
ಬೀದರ್ ಜಿಲ್ಲೆಯ ಭಾಲ್ಕಿ ಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುವಾಗ 3rd ಸೆಮಿಸ್ಟರ್ ನ ಒಂದು Subject ನಲ್ಲಿ ಅನುತ್ತೀರ್ಣ (ಫೇಲ್) ಆಗಿದ್ದೆ.
ಹಾಸ್ಟೆಲ್ ನಲ್ಲಿ ಇದ್ದ ನಾನು ಮುಕ್ತವಾಗಿ ನನ್ನ ಮಾರ್ಕ್ಸ್ ಗಳನ್ನ ಅಂಚೆ ಪತ್ರದ ಮೂಲಕ ಅಪ್ಪನಿಗೆ ತಿಳಿಸುತ್ತಿದ್ದೆ. ಆ ಕಷ್ಟ ಕಾಲದಲ್ಲಿ ವರ್ಷಕ್ಕೆ ಒಂದು ಬಾರಿ ಪಕ್ಕದ ಮನೆಯವರ Landline ಫೋನ್ ಗೆ STD ಕರೆ ಮಾಡಿ ಮಾತನಾಡಿದರೆ ಹೆಚ್ಚೆಚ್ಚು. ಹಾಗಾಗಿ ನಮ್ಮ ಸಂಪರ್ಕವಾಣಿ ಅಂತ ಇದ್ದಿದ್ದು ನಮ್ಮ ಹೆಮ್ಮೆಯ INLAND LETTER POST CARD.
ನನ್ನ ಪತ್ರದ ಪ್ರತಿಯಾಗಿ, ಅಪ್ಪ ನನಗೆ ಪತ್ರ ಬರೆದು ಒಂದಿಷ್ಟ ಸಮಾಚಾರ ತಿಳಿಸಿ "ಫೇಲ್ ಆಗಿರೋ ಬಗ್ಗೆ ಚಿಂತೆ ಬೇಡ, ಮುಂದಿನ ಬಾರಿ ಪಾಸ್ ಆಗುತ್ತಿಯ ಎಂಬ ಧೈರ್ಯದ ಮಾತುಗಳು ಬರೆದು, ಆರೋಗ್ಯದ ಕಡೆ ಹೆಚ್ಚು ಗಮನವಿರಲಿ" ಎಂದು ಬರೆದಿದ್ದರು. 2 ಅಥವಾ 3 ತಿಂಗಳಿಗೆ ಒಮ್ಮೆ ಒಂದು ಪತ್ರ ಬರುತ್ತಿತ್ತು. ಪ್ರತೀ ಪತ್ರದಲ್ಲಿ ಆರೋಗ್ಯದ ಕಡೆ ಹೆಚ್ಚು ಗಮನವಿರಲಿ ಎಂಬುದೇ ಮುಖ್ಯ ಸಂದೇಷವಿರುತ್ತಿತ್ತು. ಆ ಎಲ್ಲಾ ಪತ್ರಗಳು ಈಗಲೂ ನನ್ನ ಬಳಿ ಇವೆ.
ಚೆನ್ನಾಗಿ ನೆನಪಿದೆ, ಒಮ್ಮೆ ರಜೆಯ ಮೇಲೆ ಊರಿಗೆ ಹೋಗಿದ್ದೆ. ನಮ್ಮ ತೋಟದ ಬಳಿ ಹೊಂಗೆ ಮರದ ನೆರಳಿನಲ್ಲಿ ಕೂತು ಮಾತನಾಡುವಾಗ Fail ಆಗಿರುವ ಬಗ್ಗೆ ನಾನೇ ಪ್ರಸ್ತಾಪಿಸಿದೆ.
ತಕ್ಷಣ ಅಪ್ಪ "ಚಿಂತೆ ಬಿಡಯ್ಯಾ... ಮುಂದಿನ ಬಾರಿ ಪಾಸ್ ಆಗುತ್ತೆ. ನಿನ್ನಿಂದ ಎಷ್ಟು ಆಗುತ್ತೋ ಅಷ್ಟು ಪ್ರಯತ್ನ ಇರಲಿ ಸಾಕು..." ಎಂದರು. ಫೇಲ್ ಆಗಿರೋ ಬಗ್ಗೆ ಒಂದು ಮಾತು ಸಹ ಬಯ್ಯಲಿಲ್ಲ.
ಪ್ರತೀ ಸಲ ಹಾಸ್ಟೆಲ್ ಗೆ ವಾಪಸ್ ತೆರಳುವ ದಿನ ದೊಡ್ಡಬಳ್ಳಾಪುರ ರೈಲು ನಿಲ್ದಾಣದಲ್ಲಿ ರಾತ್ರಿ 11 ಘಂಟೆಯ ರೈಲಿಗೆ ಕಾಯುವಾಗ ಒಂದಿಷ್ಟು ಮಾತನಾಡುತ್ತಾ... ರಾತ್ರಿಯ ಆ ನಿಶ್ಯಬ್ದ ಸಮಯದಲ್ಲಿ ರೈಲು ಹೊರಟ ತಕ್ಷಣ ನಿಧಾನವಾಗಿ ಚಲಿಸುವ ರೈಲಿನೊಡನೆ ಅಪ್ಪ ಓಡುತ್ತಾ "ಹುಷಾರು ಕಣಯ್ಯಾ... ಆರೋಗ್ಯ ಕಾಪಾಡಿಕೊ..." ಎಂದು ಕೂಗಿ ಹೇಳುತ್ತಿದ್ದರು. ನನ್ನ ಕಣ್ಣಂಚಿನಲ್ಲಿ ನೀರು ತುಂಬಿರುತ್ತಿತ್ತು.
ಅಪ್ಪ ಅಮ್ಮ ಇಬ್ಬರೂ ಸಹ ಒಂದು ದಿನಕ್ಕೂ ಓದು ಓದು ಅಂತ ಒತ್ತಡ ಹಾಕಿದ್ದು ನೆನಪಿಲ್ಲ. ಹಾಗಂತ ನಾನೇನು Rank Student ಇರಲಿಲ್ಲ.
ಆದರೂ... ವಿದ್ಯಾಭ್ಯಾಸದ ಸಮಯದಲ್ಲಿ "ಓದಿನ ಕಡೆ ಹೆಚ್ಚು ಗಮನವಿರಲಿ" ಎನ್ನುವ ಬದಲು "ಆರೋಗ್ಯದ ಕಡೆ ಹೆಚ್ಚು ಗಮನವಿರಲಿ" ಎಂಬುದರ ಒಳ ಅರ್ಥ ತುಂಬಾ ಮಹತ್ವವಿದೆ ಅನ್ನಿಸುತ್ತೆ.
ನಿಮ್ಮ ಸುತ್ತ ಮುತ್ತಲಿನ ಕೆಲ ಜನರು ಆರೋಗ್ಯದ ಕಡೆ ಲಕ್ಷ್ಯ ಕೊಡದೆ, ನಂಗೇನು ಆಗಿಲ್ಲ, ಆಗೋದಿಲ್ಲ ಎಂಬ ನಿರ್ಲಕ್ಷ್ಯ ತೋರುತ್ತಿರುತ್ತಾರೆ - ಇದರ ಅರಿವು ಬೇಕಾಗಿದೆ ಎಂಬುದು ನನ್ನ ಅನಿಸಿಕೆ.
ಮಾನ್ಯ ಕಿರಣ್ ಬೇಡಿ ಯವರು ಹೇಳಿದ ಹಾಗೆ ಜೀವನದಲ್ಲಿ ಆರೋಗ್ಯವೇ ನಂಬರ್ 1 ಆಗಿರುತ್ತೆ.
ಆರೋಗ್ಯ ಇಲ್ಲದಿದ್ದರೆ ನಿಮ್ಮ ಶ್ರಮ, ಗಳಿಕೆ, ಇತ್ಯಾದಿ ಎಲ್ಲವೂ ಶೂನ್ಯ.
- ರಾಘವೇಂದ್ರ. ಜಿ. ಶ್ರೀರಾಮಯ್ಯ
9060660060
Artha Poorna vaada ankana
ReplyDelete