ಅಪ್ಪಾ... Ex-MP ಎಂದರೇನು?


ಅಪ್ಪಾ... Ex-MP ಎಂದರೇನು? ಈ ಪ್ರಶ್ನೆ ಕೇಳಿದ್ದು ನಾನೇ. 

ನಾನು PUC ವ್ಯಾಸಂಗ ಮಾಡಿದ್ದು "ಭಾರತಿ ವಸತಿ ಸಂಯುಕ್ತ ಪದವಿಪೂರ್ವ ಕಾಲೇಜು", ಹನುಮಂತನಗರ, ಮಂಡ್ಯ ಜಿಲ್ಲೆ.

ಈ ಕಾಲೇಜು ಮಾನ್ಯ ಜಿ.ಮಾದೇಗೌಡ ರು ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಗಳಲ್ಲಿ ಒಂದು.

ನಮ್ಮ ಕಾಲೇಜಿನ ಮುಖ್ಯದ್ವಾರದ ಬಳಿ ಜಿ.ಮಾದೇಗೌಡರ ಕಿರು ಪರಿಚಯದ ಭಾವಚಿತ್ರ ಇತ್ತು, ಅದರ ಕೆಳಗೆ "Ex-MP" ಎಂದು ಬರೆದಿತ್ತು. 

ಸತ್ಯವಾಗಲು Ex-MP ಏನು ಅಂತ ಗೊತ್ತಿರಲಿಲ್ಲ.  ನನಗೆ ಗೊತ್ತಿದ್ದಿದ್ದು ಇಷ್ಟೇ ಅವರು ಈ ಕಾಲೇಜಿನ ಛೇರ್ಮನ್ ಸರ್ ಎಂದು.


ಸಂಸ್ಥೆಯ ಅಧ್ಯಕ್ಷರಾಗಿದ್ದ G. ಮಾದೇಗೌಡರು ಆಗಾಗ ಸಂಜೆ ಸಮಯಲ್ಲಿ ಕಾಲೇಜಿನ ಕಚೇರಿಗೆ ಬರುತ್ತಿದ್ದರು. ಅವರು ಬಂದಾಗ ಎಲ್ಲರ ಬಾಯಲ್ಲೂ ಗುಸುಗುಸು ಮಾತು "ಛೇರ್ಮನ್ ಸರ್ ಬಂದಿದ್ದಾರಂತೆ" ಎಂಬ ಮೌಖಿಕ ಸಂದೇಶ ಎಲ್ಲಾ ರೂಮ್ ಗಳಿಗೂ ಬರುತ್ತಿತ್ತು.


ಅದರರ್ಥ "ನಿಶ್ಯಬ್ದವಾಗಿರಬೇಕು - Pin Drop Silence", ಕಾಲೇಜಿನ ಆವರಣದಲ್ಲಿ ಅನಾವಶ್ಯಕವಾಗಿ ಓಡಾಡಬಾರದು, ಕಿರುಚಾಡಬಾರದು.


ಹಾಸ್ಟೆಲ್ ನ ನಿಯಮದ ಪ್ರಕಾರ ಪ್ರತೀ ದಿನ ಸಂಜೆ 5 ರಿಂದ 6 ಘಂಟೆಯವರೆಗೆ ಆಟದ ಸಮಯ. ಎಲ್ಲಾ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ಕೊಟ್ಟಿದ್ದ ಹಳದಿ Jersey, ಕೆಂಪು ಚಡ್ಡಿ ಮತ್ತು ಶೂ ಧರಿಸಿ ಬೆಲ್ ಒಡೆದ ತಕ್ಷಣ ಕಡ್ಡಾಯವಾಗಿ ಆಟದ ಮೈದಾನಕ್ಕೆ (ಸ್ಟೇಡಿಯಂ ಗೆ) ಸಾಲಾಗಿ ತೆರಳಬೇಕು.
ಆಟದ ಮೈದಾನಕ್ಕೆ ಹೋಗುವಾಗ PT Master 'ಕುಮಾರ್' ಸರ್ ಕಾರಿಡಾರ್ ನಲ್ಲಿ ನಿಂತು ಹುಲಿಯಂತೆ ಕಣ್ಣು ರೆಪ್ಪೆಯಾಡಿಸದೆ ನಮ್ಮ ಶಿಸ್ತನ್ನು ಗಮನಿಸುತ್ತಾರೆ. ಯಾರಾದರೂ ಅಪ್ಪಿ-ತಪ್ಪಿ ಸಾಲು ತಪ್ಪಿದರೆ ಅಥವಾ ಪಿಸುಗುಟ್ಟಿದರು ಒಡೆತ ತಪ್ಪಿದ್ದಲ್ಲ. ಎಲ್ಲರ ಮುಂದೆ ಮೈದಾನಲ್ಲಿ ಕೋಲಿನಿಂದ ಒಡೆತ, ಅಥವಾ ಸ್ಟೇಡಿಯಂ ಸುತ್ತ ಓಡುವ ಶಿಕ್ಷೆ, ಅಥವಾ ಏನಾದರು ಬೇರೆ ಶಿಕ್ಷೆ ಕಟ್ಟಿಟ್ಟ ಬುತ್ತಿ.


ಆಟದ ಸಮಯದಲ್ಲಿ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಏನಾದರೂ ಆಟ ಆಡಲೇಬೇಕಿತ್ತು. ಸಂಜೆ 6 ಘಂಟೆಗೆ PT Master ಪೀಪಿ ಶಬ್ಧ ಕೇಳಿದ ತಕ್ಷಣ ತಡಮಾಡದೆ ವಾಪಸ್ ಹಾಸ್ಟೆಲ್ ಗೆ ತೆರಳಬೇಕು.


ಒಮ್ಮೆ G. ಮಾದೇಗೌಡರು ಸಂಜೆ 6 ಘಂಟೆಗೆ ಕಾರಿಡಾರ್ ನಲ್ಲೇ ನಿಂತು ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರು. ಸಾಮಾನ್ಯವಾಗಿ ಎಲ್ಲರೂ ಆಟವಾಡಿ ದಣಿದು ಬೆವರುತ್ತಿದ್ದೆವು.


ಆ ದಿನ ನಾನು ಬರಿ ಕೆರಮ್ ಆಟ ಆಡಿದ್ದೆ, ಸ್ವಲ್ಪವೂ ಬೆವತಿಲ್ಲ. ಆಕಸ್ಮಿಕವಾಗಿ ನನನ್ನು ಗಮನಿಸಿ "ಹೇ, ಬಾ ಇಲ್ಲಿ" ಎಂದು ಕರೆದರು.


ತಕ್ಷಣ ಎದೆಯಲ್ಲಿ ಡವ-ಡವ ಶುರುವಾಯ್ತು, ಸಾಲಿನಿಂದ ಹೊರಬಂದು ತಲೆ ಬಗ್ಗಿಸಿ ಸ್ವಲ್ಪ ದೂರದಲ್ಲೇ ನಿಂತೆ. ಏರು ಧ್ವನಿಯಲ್ಲಿ "ಆಟವಾಡಿ ಬಂದೆಯ ಅಥವಾ ಸ್ಟೇಡಿಯಂ ನಲ್ಲಿ ಕೂತಿದ್ದು ಬಂದೆಯ" ಎಂದು ಪ್ರಶ್ನಿಸಿದರು. ನಿಧಾನವಾಗಿ ಕೇರಮ್ ಆಡಿದೆ ಸರ್ ಎಂದು ಉತ್ತರಿಸಿದೆ. ಅದು ಅವರಿಗೆ ಕೇಳುಸ್ತೋ ಬಿಟ್ಟಿತೋ ಗೊತ್ತಿಲ್ಲ.


ತಕ್ಷಣ ಅವರು ಹೇಳಿದರು "ಆಟಕ್ಕೆ ಬಿಡೋದು ಚೆನ್ನಾಗಿ ಬೆವರು ಬರಲಿ ಅಂತ. ಹೋಗು ಸ್ಟೇಡಿಯಂ ಸುತ್ತ 5 ರೌಂಡ್ ಓಡಿ ಬಂದು ಬೆವರು ತೋರಿಸಿ ನಂತರ ಹಾಸ್ಟೆಲ್ ಒಳಗೆ ಹೋಗಬೇಕು" ಎಂದು ಗದರುತ್ತಾ ವಾಪಸ್ ಮೈದಾನಕ್ಕೆ ಕಳುಹಿಸಿದರು.


ಮಂಡ್ಯದ ಗಂಡು ಚಲನಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ರವರ ಸೈಕಲ್ ರೇಸ್ ಚಿತ್ರೀಕರಣ ಆಗಿದೆಯಲ್ವಾ ಅದೇ ಸ್ಟೇಡಿಯಂ. ಆ ಸ್ಟೇಡಿಯಂ ಮೈದಾನ ಸ್ವಲ್ಪ ದೊಡ್ಡದು.


ಒಂದೆರಡು ರೌಂಡ್ ಓಡುವಷ್ಟಲ್ಲೇ ಸುಸ್ತು. PT ಮಾಸ್ಟರ್ ಬಂದು "ಹೇಯ್ ಸಾಕು ಹೋಗು" ಎಂದು ಹಾಸ್ಟೆಲ್ ಗೆ ಕಳುಹಿಸಿದರು.


ಗೊತ್ತಿಲ್ಲ... ವಿದ್ಯಾರ್ಥಿಯ ಸುರಕ್ಷತೆ ಗಮನದಲ್ಲಿ ಇಟ್ಟುಕೊಂಡು PT ಮಾಸ್ಟರ್ ನ ಚೇರ್ಮನ್ ಸರ್ ಕಳಿಸಿದ್ರೋ ಏನೋ.? ಏಕೆಂದರೆ 6 ಘಂಟೆಯ ನಂತರ ಆ ಸ್ಟೇಡಿಯಂ ನಲ್ಲಿ ಯಾವೊಬ್ಬ ನರಪಿಳ್ಳೆಯು ಇರೋದಿಲ್ಲ.


PT ಮಾಸ್ಟರ್ ಹೇಳಿದ ತಕ್ಷಣ ಓಡಿ ಸುಸ್ತಾಗಿದ್ದ ನಾನು ಬುಸುಗುಟ್ಟುತ್ತಾ ಭಯದಿಂದಲೇ ಹೋದೆ. ಹೊರಗೆ ಚೇರ್ಮನ್ ಸರ್ ಕಾರು ಇತ್ತು ಆದರೆ ಕಾರಿಡಾರ್ ನಲ್ಲಿ ಅವರು ಇರಲಿಲ್ಲ.

ಯಪ್ಪಾ..! ಬಾಚವು ಅಂದುಕೊಂಡು ರೂಮ್ ಗೆ ಓಡಿ ಹೋದೆ.


ಆ ದಿನಕ್ಕೆ ಅದು ನನ್ನ ದುರಾದೃಷ್ಟ ಅನ್ನಿಸಿದ್ದು ಸತ್ಯ. ಆದರೆ ಈಗ ಅನ್ನಿಸುತ್ತೆ ಆ ಘಟನೆ ನನ್ನ ಅದೃಷ್ಟವೇ ಸರಿ. ಏಕೆಂದರೆ, ಅವರು ನನನ್ನ ಕರೆದು ಶಿಕ್ಷೆ ಕೊಡುವುದರ ಮೂಲಕ ನನಗೆ ಮಾತನಾಡಿಸಿದ್ದು.


ಕಾಲೇಜು ರಜೆ ಕೊಟ್ಟಾಗ ನಮ್ಮ ಹಳ್ಳಿಗೆ ಹೋಗಿದ್ದೆ. ನನ್ನ ಅಪ್ಪನ ಜೊತೆ ಹಾಗೆ ಸುಮ್ಮನೆ ಮಾತನಾಡುವಾಗ ಚೇರ್ಮನ್ ಸರ್ ನನಗೆ ಶಿಕ್ಷೆ ಕೊಟ್ಟ ವಿಚಾರ ಸಹ ಅಪ್ಪನ ಬಳಿ ಹೇಳಿದೆ.

ಹೌದಾ... ಎಂದು ಅಪ್ಪ ನಕ್ಕರು.!😁


"Ex-MP" ಎಂಬುದು ತಕ್ಷಣ ನೆನಪಾಯ್ತು ಹಾಗೆ ಕೇಳಿದೆ "ಅಪ್ಪಾ..., Ex-MP ಎಂದರೇನು?".


ಮಾಜಿ ಲೋಕಸಭಾ ಸದಸ್ಯರು, ಕಣಯ್ಯಾ ಎಂದು ಅಪ್ಪ ಹೇಳಿದರು. ಅದರ ಬಗ್ಗೆ ಸ್ವಲ್ಪ ವಿವರಣೆ ಸಹ ಕೊಟ್ಟ ನೆನಪು. ಹಾಗೆಯೇ G. ಮಾದೇಗೌಡರ ಹೋರಾಟಗಳ ಬಗ್ಗೆಯೂ ಸಹ ಸ್ವಲ್ಪ ಹೇಳಿದರು. ಸತ್ಯವಾಗಲು ಆಗ ನನಗೆ ಏನೂ ಅರ್ಥವಾಗಿರಲಿಲ್ಲ. 


ಆದರೆ ಜಿ.ಮಾದೇಗೌಡರು ಎಂದರೆ ಒಂದು ಗೌರವ, ಕೃತಜ್ಞತಾ ಭಾವವಂತು ಮೂಡಿತ್ತು. ನನ್ನ ವಿದ್ಯಾಭ್ಯಾಸದಲ್ಲಿ ಪರಿವರ್ತನೆ ಆಗಿದ್ದೇ ಇವರು ಕಟ್ಟಿ ಬೆಳೆಸಿರುವ ವಿದ್ಯಾಸಂಸ್ಥೆಯಲ್ಲಿ.

ಒಳ್ಳೆಯ ಸಂಸ್ಥೆ ಕೂಡ. ಇಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮದೇ ಆದ ಜೀವನ ಕಟ್ಟಿಕೊಂಡಿದ್ದಾರೆ.


ಅವರ ರಾಜಕೀಯ ಹೋರಾಟ, ಕಾವೇರಿ ಚಳುವಳಿಗಳು ಎಲ್ಲವೂ ಅವಿಸ್ಮರಣೀಯ. ಇಂತಹ ಮುತ್ಸದ್ದಿ ನಮ್ಮೆಲ್ಲರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ.


- ರಾಘವೇಂದ್ರ. ಜಿ. ಶ್ರೀರಾಮಯ್ಯ

9060660060




Comments

  1. Nice and he is a great person

    ReplyDelete
  2. ಡಾಕ್ಟರ್ ಜಿ.ಮಾದೇಗೌಡರು ಒಬ್ಬ ಸಾಮಾಜಿಕ ಹರಿಕಾರ ಕಾವೇರಿ ನೀರಿನ ಹಂಚಿಕೆಯಲ್ಲಿ ತಮಿಳುನಾಡು ತಗಾದೆ ತೆಗೆದಾಗಲೆಲ್ಲ ಸದಾ ಮುಂಚೂಣಿಯಲ್ಲಿರುತಿದ್ದ ದಿಟ್ಟ ಹೋರಾಟಗಾರ ಹಾಗು ಹಿರಿಯ ಮುತ್ಸದ್ದಿ ಮತ್ತು ವಿಶೇಷವಾಗಿ ಮಂಡ್ಯ ಜನತೆ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದರು ಇಂತ ವ್ಯಕ್ತಿತ್ವದ ಬಗ್ಗೆ
    ತಮ್ಮದೇ ಆದ ಶೈಲಿಯಲ್ಲಿ ತಮ್ಮ ಅನುಭವವನ್ನು ತುಂಬಾ ಅಚ್ಚುಕ್ಕಟ್ಟಾಗಿ ನಿರೂಪಿಸಿದ್ದೀರಿ ಹಾಗು ನಿಮ್ಮ ಅದ್ಭುತ ಸೊಗಸಾದ ಕನ್ನಡಕ್ಕೆ ನನ್ನದೊಂದು ಸಲಾಂ 🙏

    ReplyDelete
  3. ನಿಮ್ಮ ಬರವಣಿಗೆಯ ಶೈಲಿ ಚೆನ್ನಾಗಿದೆ

    ReplyDelete
  4. ವಿಜಯ್ ಆರಾಧ್ಯJuly 19, 2021 at 12:55 PM

    ತುಂಬಾ ಸೊಗಸಾದ ಬರವಣಿಗೆ, ಕಣ್ಣ ಮುಂಧೆ ಸಿನಿಮಾ ಕಂಡಂತೆ ನಿಮ್ಮ ಅನುಭವಗಳನ್ಸು ಬಿಂಬಿಸಿದ್ದೀರ.ಮತ್ತಷ್ಟು ಲೇಖನಗಳಿಗೆ ಕಾತುರದಿಂದ ಕಾಯುತ್ತಿರುತ್ತೇನೆ.

    ReplyDelete

Post a Comment

ನಿಮ್ಮ ಅನಿಸಿಕೆ ಅಭಿಪ್ರಾಯ ಇಲ್ಲಿ ಬರೆಯಿರಿ

Popular posts

ಸೂತಕದಲ್ಲಿ ಸಡಗರದ ರಾಜ್ಯೋತ್ಸವ ಬೇಡ

ಶ್ರೀಮಂತನಾಗಬೇಕಾದರೆ ಹೆಚ್ಚು ವಿದ್ಯಾವಂತನಾಗಬೇಡ.!

ಸಮುದಾಯ ಪ್ರಾಬಲ್ಯದ ಮುಂದೆ ಮಂಡಿಯೂರಿದ ಸಂಗೀತ ಸಾಧನೆ

1 ಲಕ್ಷ ರೂಪಾಯಿ ಒಂದು ಕೋಟಿ ಆಯಿತು.!

ಮನೋಜ್ಞ ಮಾದರಿ

ಅಸಲಿ ರೈತ, ನಕಲಿ ಪ್ರೀತಿ.!

ಹೇಗಿದ್ದಾರೆ ಮೇಷ್ಟ್ರು..?

ಸಾರ್ಥಕ ನಿವಾಸ

ರೈತರೆಲ್ಲ ಶ್ರೀಮಂತರಾಗುತ್ತಾರಂತೆ.!